ಶುಕ್ರವಾರ, ಮಾರ್ಚ್ 24, 2017

Hesaru bele dose recipe in kannada | ಹೆಸರು ಬೇಳೆ ದೋಸೆ ಮಾಡುವ ವಿಧಾನ

Hesaru bele dose recipe in kannada

Hesaru bele dose recipe in kannada | ಹೆಸರು ಬೇಳೆ ದೋಸೆ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

 1. 1 ಕಪ್ ಹೆಸರು ಬೇಳೆ 
 2.  1/4 ಕಪ್ ಅಕ್ಕಿ ಹಿಟ್ಟು
 3. 1 - 2 ಹಸಿರುಮೆಣಸಿನಕಾಯಿ
 4. ಸಣ್ಣ ತುಂಡು ಶುಂಠಿ 
 5. ದೊಡ್ಡ ಚಿಟಿಕೆ ಇಂಗು ಅಥವಾ 1/2 ಟೀಸ್ಪೂನ್ ಜೀರಿಗೆ 
 6. 2 ಟೇಬಲ್ ಚಮಚ ತೆಂಗಿನ ತುರಿ
 7. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
 8. ಉಪ್ಪು ರುಚಿಗೆ ತಕ್ಕಷ್ಟು.

ಹೆಸರು ಬೇಳೆ ದೋಸೆ ಮಾಡುವ ವಿಧಾನ:

 1. ಹೆಸರು ಬೇಳೆಯನ್ನು ತೊಳೆದು ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಯಲು ಬಿಡಿ.
 2. 15 ನಿಮಿಷದ ನಂತರ ನೀರು ಬಗ್ಗಿಸಿ ಅಕ್ಕಿ ಹಿಟ್ಟು, ಹಸಿರುಮೆಣಸಿನಕಾಯಿ, ಶುಂಠಿ, ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಅಗತ್ಯವಿದ್ದಷ್ಟು ನೀರು ಹಾಕಿ ನಯವಾಗಿ ಅರೆಯಿರಿ.
 3. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇಂಗು (ಅಥವಾ ಜೀರಿಗೆ) ಸೇರಿಸಿ ಚೆನ್ನಾಗಿ ಕಲಸಿ. ಕೂಡಲೇ ದೋಸೆ ಮಾಡಿ. 
 4. ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ. 
 5. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, ಮುಚ್ಚಳ ಮುಚ್ಚಿ ಬೇಯಿಸಿ.
 6. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ. 

ಗುರುವಾರ, ಮಾರ್ಚ್ 23, 2017

Alasande kalu gojju recipe in Kannada | ಅಲಸಂದೆ ಕಾಳು ಗೊಜ್ಜು ಮಾಡುವ ವಿಧಾನ

Alasande kalu gojju recipe in Kannada

Alasande kalu gojju recipe in Kannada | ಅಲಸಂದೆ ಕಾಳು ಗೊಜ್ಜು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

 1. 1/2 ಕಪ್ ಅಲಸಂದೆ ಕಾಳು
 2. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
 3. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆಗೆ ಬೇಕಾಗುವ ಪದಾರ್ಥಗಳು:

 1. 4 - 5 ಬೆಳ್ಳುಳ್ಳಿ ಅಥವಾ 1/2 ಚಮಚ ಜೀರಿಗೆ 
 2. 2 - 4 ಹಸಿರು ಮೆಣಸಿನಕಾಯಿ
 3. ಒಂದು ಹಿಡಿ ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

 1. 1/2 ಚಮಚ ಸಾಸಿವೆ
 2. 4 - 5 ಕರಿಬೇವಿನ ಎಲೆ
 3. 4 ಚಮಚ ಅಡುಗೆ ಎಣ್ಣೆ 

ಅಲಸಂದೆ ಕಾಳು ಗೊಜ್ಜು ಮಾಡುವ ವಿಧಾನ:

 1. ಅಲಸಂದೆ ಕಾಳನ್ನು 2 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಸಮಯದ ಅಭಾವವಿದ್ದಲ್ಲಿ ನೆನಸದೆಯೂ ಮಾಡಬಹುದು. ನೆನೆಸದಿದ್ದಲ್ಲಿ ಬೇಯಿಸಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುತ್ತದೆ. 
 2. ನೆನೆಸಿದ ಕಾಳನ್ನು ಮೆತ್ತಗೆ ಬೇಯಿಸಿಕೊಳ್ಳಿ. ಬೇಯಿಸುವಾಗ ಉಪ್ಪು ಸೇರಿಸಬೇಡಿ. 
 3. ಬೇಯಿಸಿದ ಕಾಳನ್ನು ಸೌಟಿನ ಹಿಂಭಾಗ ಬಳಸಿ ಸ್ವಲ್ಪ ಮಸೆಯಿರಿ ಅಥವಾ ಮ್ಯಾಶ್ ಮಾಡಿಕೊಳ್ಳಿ.
 4. ಅದೇ ಸಮಯದಲ್ಲಿ ಮಸಾಲೆಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಅರೆದಿಟ್ಟುಕೊಳ್ಳಿ. 
 5. ಒಂದು ಬಾಣಲೆಯಲ್ಲಿ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ತಯಾರಿಸಿ. 
 6. ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. 
 7. ಅರೆದಿಟ್ಟ ಮಸಾಲೆ ಸೇರಿಸಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ. 
 8. ನಂತರ ಬೇಯಿಸಿದ ಕಾಳನ್ನು ಸೇರಿಸಿ. ಉಪ್ಪು ಮತ್ತು  ಅಗತ್ಯವಿದ್ದಷ್ಟು ನೀರು ಸೇರಿಸಿ. 
 9. ಚೆನ್ನಾಗಿ ಕುದಿಸಿ. ಚಪಾತಿಯೊಂದಿಗೆ ಬಡಿಸಿ. 

ಮಂಗಳವಾರ, ಮಾರ್ಚ್ 21, 2017

Bele holige or obbattu recipe in Kannada | ಬೇಳೆ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ

Bele holige or obbattu recipe in Kannada

Bele holige or obbattu recipe in Kannada | ಬೇಳೆ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ

ಕಣಕಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

 1. 1/2 ಕಪ್ ಮೈದಾ ಹಿಟ್ಟು ಅಥವಾ 1 ಕಪ್ ಗೋಧಿ ಹಿಟ್ಟು 
 2. 1/4 ಕಪ್ ನೀರು (ಮೆತ್ತಗಿನ ಹಿಟ್ಟು ಕಲಸಲು ಬೇಕಾಗುವಷ್ಟು)
 3. ಉಪ್ಪು ರುಚಿಗೆ ತಕ್ಕಷ್ಟು
 4. ಚಿಟಿಕೆ ಅರಶಿನ
 5. 3 ಟೇಬಲ್ ಚಮಚ ಅಡುಗೆ ಎಣ್ಣೆ

ಹೂರಣಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

 1. 1/2 ಕಪ್ ಕಡ್ಲೆಬೇಳೆ ಅಥವಾ ತೊಗರಿಬೇಳೆ 
 2. 1/2 ಕಪ್ ಪುಡಿ ಮಾಡಿದ ಬೆಲ್ಲ ಅಥವಾ ಸಕ್ಕರೆ (ಮಧ್ಯಮ ಸಿಹಿ)
 3. 2 ಟೇಬಲ್ ಚಮಚ ತೆಂಗಿನ ತುರಿ (ಬೇಕಾದಲ್ಲಿ)
 4. 2 ಏಲಕ್ಕಿ

ಬೇಳೆ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ:

 1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ಅರಶಿನ ಹಾಕಿ. 
 2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಬಹಳ ಮೃದುವಾದ, ಕೈಗೆ ಅಂಟುವಂತಹ ಹಿಟ್ಟನ್ನುತಯಾರಿಸಿ. 
 3. ಮೇಲಿನಿಂದ ಎಣ್ಣೆ ಸುರಿದು, ಮುಚ್ಚಳ ಮುಚ್ಚಿ, 30 ನಿಮಿಷ ಪಕ್ಕಕ್ಕಿಡಿ. 
 4. ಈಗ ಹೂರಣ ತಯಾರಿಸಲು ಬೆಳೆಯನ್ನು ತೊಳೆದು ಎರಡು ಪಟ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ, 3 - 4 ವಿಷಲ್ ಮಾಡಿದರೆ ಸಾಕು. 
 5. ಬೇಯಿಸಿದ ಬೇಳೆಯ ನೀರು ಬಸಿದು ತೆಗೆಯಿರಿ. ಈ ನೀರನ್ನು ಸಾರು ಮಾಡಲು ಉಪಯೋಗಿಸಬಹುದು. 
 6. ಬೇಯಿಸಿದ ಬೆಳೆಗೆ, ತೆಂಗಿನ ತುರಿ, ಏಲಕ್ಕಿ ಮತ್ತು ಪುಡಿಮಾಡಿದ ಬೆಲ್ಲವನ್ನು ಹಾಕಿ ನುಣ್ಣನೆ ಅರೆಯಿರಿ. 
 7. ಅರೆದ ಮಿಶ್ರಣವನ್ನು ಬಾಣಲೆಗೆ ಹಾಕಿ, ಸ್ಟವ್ ಮೇಲಿಟ್ಟು ಹೆಚ್ಚಿನ ನೀರಿನಂಶ ಹೋಗುವವರೆಗೆ ಮಗುಚಿ. ತುಂಬ ಗಟ್ಟಿ ಮಾಡುವುದು ಬೇಡ ಏಕೆಂದರೆ ತಣ್ಣಗಾದ ಮೇಲೆ ಗಟ್ಟಿಯಾಗುತ್ತದೆ. 
 8. ಹೂರಣ ಬಿಸಿ ಆರಿದ ನಂತರ ದೊಡ್ಡ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟು ಕೊಳ್ಳಿ. ಉಂಡೆ ಮೃದುವಾಗಿರಬೇಕು. 
 9. ಈಗ ಕಣಕವನ್ನು ಸಹ ಉಂಡೆ ಮಾಡಿಟ್ಟು ಕೊಳ್ಳಿ. ಉಂಡೆ ಮಾಡಲು ಸಣ್ಣ ಲಿಂಬೆ ಗಾತ್ರದ ಹಿಟ್ಟನ್ನು ಚಿವುಟಿ ತೆಗೆದು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆ ಮೇಲೆ ಹಾಕಿದರಾಯಿತು. 
 10. ನಂತರ ಕೈಗೆ ಹಿಟ್ಟು ಮುಟ್ಟಿಸಿಕೊಂಡು ಕಣಕವನ್ನು ಬೆರಳಿನಿಂದ ತೆಗೆದು, ಜಾಗ್ರತೆಯಿಂದ ಹೂರಣವನ್ನು ಒಳಗೆ ಸೇರಿಸಿ. 
 11. ಬೇಕಾದಷ್ಟು ಹಿಟ್ಟು ಉದುರಿಸಿ, ತೆಳುವಾಗಿ ಲಟ್ಟಿಸಿ. ಕೈಗೆ ಎಣ್ಣೆ ಮುಟ್ಟಿಸಿಕೊಂಡು ತಟ್ಟಿ, ಸ್ವಲ್ಪ ದಪ್ಪನಾಗಿ ಸಹ ಮಾಡಬಹುದು. 
 12. ಕಾದ ಹಂಚಿನ ಮೇಲೆ ಹಾಕಿ ಎರಡು ಬದಿ ಕಾಯಿಸಿ. ರುಚಿ ರುಚಿಯಾದ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.

Related Posts Plugin for WordPress, Blogger...