ಮಂಗಳವಾರ, ಡಿಸೆಂಬರ್ 8, 2015

Hagalakayi sihi gojju | ಹಾಗಲಕಾಯಿ ಸಿಹಿ ಗೊಜ್ಜು

ಹಾಗಲಕಾಯಿ ಸಿಹಿ ಗೊಜ್ಜು ಮಾಡುವ ವಿಧಾನ 

ಹಾಗಲಕಾಯಿ ಸಿಹಿ ಗೊಜ್ಜು ಒಂದು ಸರಳ ಮತ್ತು ರುಚಿಕರ ಅಡುಗೆಯಾಗಿದೆ. ಹಾಗಲಕಾಯಿಯನ್ನು ಇಷ್ಟಪಡದೇ ಇರುವವರಿಗೆ ಇದೊಂದು ಹೇಳಿಮಾಡಿಸಿದ ಅಡುಗೆಯಾಗಿದ್ದು, ಇದರ ಉಪ್ಪು, ಹುಳಿ, ಖಾರ, ಕಹಿ ಮತ್ತು ಸಿಹಿ ಮಿಶ್ರಿತ ರುಚಿ ಬಾಯಲ್ಲಿ ನೀರೂರಿಸುತ್ತದೆ. ಒಮ್ಮೆ ತಿಂದರೆ ಇನ್ನೊಮ್ಮೆ ತಿನ್ನಬೇಕೆನಿಸುತ್ತದೆ.
ರುಚಿ ಮಾತ್ರವಲ್ಲ. ಹಾಗಲಕಾಯಿ ಆರೋಗ್ಯಕ್ಕೆ ಸಹ ಬಹಳ ಒಳ್ಳೆಯದು. ಹಾಗಲಕಾಯಿ ರಕ್ತ ಸಮಸ್ಯೆಯ ಚಿಕಿತ್ಸೆಯಲ್ಲಿ ಅತ್ಯಂತ ಪ್ರಯೋಜನಕಾರಿ, ಕಾಲರಾ, ಮಧುಮೇಹ, ಕಣ್ಣಿನ ಸಮಸ್ಯೆ, ಸಂಧಿವಾತ, ಸೋರಿಯಾಸಿಸ್, ಉಸಿರಾಟದ ತೊಂದರೆಗಳು ಮತ್ತು ಪೈಲ್ಸ್ ಹೀಗೆ ಹತ್ತು ಹಲವು ತೊಂದರೆಗಳನ್ನು ದೂರವಿಡಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಮತ್ತು ದೇಹದ ಶಕ್ತಿ ಹೆಚ್ಚುತ್ತದೆ. ಆಲ್ಕೊಹಾಲ್ ಬಳಕೆಯಿಂದ ಆದ ತೊಂದರೆಗಳನ್ನು ಸರಿಪಡಿಸುತ್ತದೆ ಮತ್ತು ರಕ್ತ ಶುದ್ಧೀಕರಿಸುತ್ತದೆ. ಹಾಗಾಗಿ ಹಾಗಲಕಾಯಿಯನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು.

ತಯಾರಿ ಸಮಯ: 20 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಹಾಗಲಕಾಯಿ
  2. 2 ದೊಡ್ಡ ನಿಂಬೆ ಗಾತ್ರದ ಬೆಲ್ಲ
  3. 1 ನಿಂಬೆ ಗಾತ್ರದ ಹುಣಿಸೆಹಣ್ಣು
  4. 4 ಟೀಸ್ಪೂನ್ ಅಡುಗೆ ಎಣ್ಣೆ
  5. 1/2 ಟೀಸ್ಪೂನ್ ಸಾಸಿವೆ
  6. 1 ಟೀಸ್ಪೂನ್ ಉದ್ದಿನ ಬೇಳೆ
  7. 1 ಟೀಸ್ಪೂನ್ ಕಡ್ಲೆಬೇಳೆ
  8. 1/4 ಟೀಸ್ಪೂನ್ ಅರಶಿನ ಪುಡಿ
  9. 4-5 ಕರೀ ಬೇವಿನ ಎಲೆ
  10. 1-2 ಹಸಿ ಮೆಣಸಿನ ಕಾಯಿ
  11. 1 ಟೀಸ್ಪೂನ್ ಸಾರಿನ ಹುಡಿ (1/2 ಟೀಸ್ಪೂನ್ ಅಚ್ಚ ಖಾರದ ಪುಡಿ+ 1/2 ಟೀಸ್ಪೂನ್ ಧನಿಯಾ ಪುಡಿ+ 1/4 ಟೀಸ್ಪೂನ್ ಜೀರಿಗೆ ಪುಡಿ)
  12. 1/4 ಕಪ್ ತೆಂಗಿನ ತುರಿ
  13. ಉಪ್ಪು ರುಚಿಗೆ ತಕ್ಕಷ್ಟು.

ಹಾಗಲಕಾಯಿ ಸಿಹಿ ಗೊಜ್ಜು ಮಾಡುವ ವಿಧಾನ:

  1. ಹಾಗಲಕಾಯಿಯನ್ನು ತೊಳೆದು ಉದ್ದವಾಗಿ ಕತ್ತರಿಸಿ. ಬೀಜಗಳು ತೆಗೆದು ಸಣ್ಣ ಅಥವಾ ತೆಳುವಾದ ತುಂಡುಗಳಾಗಿ ಹೆಚ್ಚಿ. 10 ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ನೆನೆಸಿಡಿ(1/2 ಚಮಚ ಉಪ್ಪು ಮತ್ತು ನೀರು).
  2. ಬಾಣಲೆ ಬಿಸಿ ಮಾಡಿ, ಎಣ್ಣೆ, 1/2 ಚಮಚ ಸಾಸಿವೆ, ಉದ್ದಿನ ಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ.
  3. ಈಗ ನೀರನ್ನು ಹಿಂಡಿ ತೆಗೆದು ಕತ್ತರಿಸಿದ ಹಾಗಲಕಾಯಿಯನ್ನು ಹಾಕಿ. 2 ನಿಮಿಷ ಹುರಿಯಿರಿ. ಅರಿಶಿನ ಪುಡಿ ಸೇರಿಸಿ ಪುನಃ ಕೆಲವು ನಿಮಿಷಗಳ ಕಾಲ ಹುರಿಯಿರಿ. ನಂತರ ಉಪ್ಪು , ಬೆಲ್ಲ , ಹುಣಸೆ ರಸ ಮತ್ತು ಸ್ವಲ್ಪ ನೀರು ಹಾಕಿ. ಕುದಿಯಲು ಶುರುವಾದ ಕೂಡಲೇ ಉರಿ ಕಡಿಮೆ ಮಾಡಿ. ಮುಚ್ಚಳವನ್ನು ಮುಚ್ಚಬೇಡಿ. ಆಗಾಗ್ಯೆ ಮಗುಚುತ್ತಾ ಇರಿ. ಈ ಹಂತ ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
  4. ನೀರಾರುತ್ತಾ ಬಂದಾಗ ಸಾರಿನ ಪುಡಿ ಮತ್ತು ತೆಂಗಿನತುರಿ ಸೇರಿಸಿ, ಚೆನ್ನಾಗಿ ಕಲಸಿ. ಬಿಸಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...